1908-80. ಅಮೆರಿಕದ ರಸಾಯನ ವಿಜ್ಞಾನಿ, ವಿಕಿರಣಪಟು ಕಾರ್ಬನ್ ಕಾಲನಿರ್ಣಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಸ್ನಾತಕನಾಗಿ (1931) ಪಿಎಚ್.ಡಿ. ಪಡೆದು ಅಲ್ಲೆ ಪ್ರಾಧ್ಯಾಪಕನಾದ. ಎರಡನೆಯ ಮಹಾಯುದ್ಧ (1939-45) ನಡೆಯುತ್ತಿತ್ತು. ಆಗ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿದ್ದ ಇವನಿಗೆ ಪರಮಾಣು ಬಾಂಬ್‍ಗೆ ಅಗತ್ಯವಾದ ಯುರೇನಿಯಮ್-235 ಸಮಸ್ಥಾನಿಯನ್ನು ಇತರ ಸಮಸ್ಥಾನಿಗಳಿಂದ ಬೇರ್ಪಡಿಸುವ ಕೆಲಸವನ್ನು ವಹಿಸಲಾಗಿತ್ತು. ಸಮಸ್ಥಾನಿಗಳು ರಾಸಾಯನಿಕವಾಗಿ ಸದೃಶ. ಆದ್ದರಿಂದ ಭೌತ ವಿಧಾನಗಳಿಂದ ಮಾತ್ರ ಅವನ್ನು ಪ್ರತ್ಯೇಕಿಸುವುದು ಸಾಧ್ಯ ಎಂದು ಮನಗಂಡ ಈತ ಬೈಜಿಕ ಭೌತವಿಜ್ಞಾನದಲ್ಲಿ ಆಸಕ್ತನಾದ. 1945ರಲ್ಲಿ ಶಿಕಾಗೊ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲ್ಪಟ್ಟ. ಅಲ್ಲಿ ಕಾರ್ಬನ್-14 ಸಮಸ್ಥಾನಿಯ ಅಧ್ಯಯನದಲ್ಲಿ ತೊಡಗಿದ. ಅದು ಈಗಾಗಲೇ ಪತ್ತೆಯಾಗಿತ್ತು (1940). ಅದರ ಅರ್ಧಾಯು ಸು. 6000 ವರ್ಷಗಳು. ಇಂಥ ದೀರ್ಘಾಯು ಸಮಸ್ಥಾನಿಯಲ್ಲಿ ಏನೋ ವಿಶೇಷ ಇರಬೇಕೆಂಬ ಚಿಂತೆ ಅವನನ್ನು ಬಾಧಿಸತೊಡಗಿತು. ವಾಯುಮಂಡಲದಲ್ಲಿರುವ ನೈಟ್ರೊಜನ್ ಪರಮಾಣುಗಳಿಗೆ ವಿಶ್ವಕಿರಣಗಳಲ್ಲಿರುವ (ಕಾಸ್ಮಿಕ್‍ರೇಸ್) ನ್ಯೂಟ್ರಾನ್‍ಗಳು ಬಡಿದು C-14 ಉತ್ಪತ್ತಿಯಾಗುವುದು. ಆದ್ದರಿಂದ  ವಾಯುಮಂಡಲದಲ್ಲಿರುವ ಕಾರ್ಬನ್ ಡೈಆಕ್ಸೈಡ್‍ನಲ್ಲೂ (CO2) ಲೇಶಾಂಶ C-14 ಇರಲೇಬೇಕೆಂದು ಅವನಿಗೆ ತೋಚಿತು. ದ್ಯುತಿಸಂಶ್ಲೇಷಣೆಯ ಫಲವಾಗಿ ವಾಯುಮಂಡಲದ ಕಾರ್ಬನ್ ಡೈಆಕ್ಸೈಡ್‍ನಲ್ಲಿರುವ ಕಾರ್ಬನ್ ಸಸ್ಯಗತವಾಗಿ ಆಕ್ಸಿಜನ್ ಬಿಡುಗಡೆಯಾಗುವುದು. ಆದ್ದರಿಂದ ಸಸ್ಯಕೋಶಗಳಲ್ಲಿ ಸ್ವಲ್ಪವಾದರೂ C-14 ಇರಲೇಬೇಕು. ಆಧುನಿಕ ವಿಶ್ಲೇಷಣ ವಿಧಾನಗಳಿಂದ ಅದನ್ನು ಪತ್ತೆ ಹಚ್ಚುವುದು ಕಷ್ಟವಾಗದು ಎಂದು ಬಗೆದ. ಸಸ್ಯಾಹಾರಿಗಳಾದ ಪ್ರಾಣಿಗಳ ಜೀವಕೋಶಗಳಲ್ಲಿ C-14 ಇರುವುದು ಶತಸ್ಸಿದ್ಧ ಎಂದು ಈತ ತೀರ್ಮಾನಿಸಿದ. ಪ್ರಾಣಿ ಮರಣಿಸಿದರೆ C-14 ಪೂರೈಕೆ ನಿಲ್ಲುತ್ತದೆ. ಈಗಾಗಲೇ ಅದರಲ್ಲಿ ಜಮೆಗೊಂಡಿರುವ ಈ ಸಮಸ್ಥಾನಿ ಒಂದು ನಿರ್ದಿಷ್ಟ ದರದಲ್ಲಿ ಕ್ಷಯಿಸುವುದು. ಆದ್ದರಿಂದ ಯಾವುದಾದರೂ ಪ್ರಾಚೀನ ಅವಶೇಷದಲ್ಲಿರುವ (ಮರ, ಬಟ್ಟೆ, ಕೊಳೆಯದಂತೆ ರಕ್ಷಿಸಲ್ಪಟ್ಟಿರುವ ಮಮ್ಮಿಗಳು ಇತ್ಯಾದಿ) C-14 ಕ್ಷಯದರವನ್ನು ಜೀವಂತಕೋಶಗತವಾಗಿರುವ C-14 ಕ್ಷಯದರಕ್ಕೆ ಹೋಲಿಸಿ ಅವಶೇಷದ ಆಯುಷ್ಯವನ್ನು ಲೆಕ್ಕಹಾಕಬಹುದು ಎಂದು ಇವನಿಗೆ ಹೊಳೆಯಿತು. ಈ ತೀರ್ಮಾನ ಸಕಾರಣವಾಗಿತ್ತು. 1947ರ ಹೊತ್ತಿಗೆ ಈತ ಅಂಥ ಒಂದು ತಂತ್ರವನ್ನು ರೂಪಿಸಿದ. ಅದರ ಸಂಕ್ಷಿಪ್ತ ವಿವರ ಹೀಗಿದೆ : ಜೀವಂತ ಕೋಶಗಳಲ್ಲಿರುವ C-14 ಕ್ಷಯದರ ಮಿನಿಟಿಗೆ ಪ್ರತಿ ಒಂದು ಗ್ರಾಮ್‍ಗೆ 15.30.1 ಗುಣಕಗಳು (ಕೌಂಟ್ಸ್). ಇದು ಗಣಕಯಂತ್ರಗಳಿಂದ ದೊರೆತ ಮಾಹಿತಿ. C-14ನ ಅರ್ಧಾಯು 5760 ವರ್ಷಗಳು. 1 ಗ್ರಾಮ್ ಅವಶೇಷ ಪ್ರತಿಮಿನಿಟಿಗೆ 7.6 ಗುಣಕಗಳನ್ನು ಕೊಡುವುದಾದರೆ ಅದು 5,760 ವರ್ಷಗಳಷ್ಟು ಹಳೆಯದು, 3.8 ಆಗಿದ್ದರೆ 11,520 ವರ್ಷಗಳಷ್ಟು ಹಳೆಯದು ಎಂದು ಲೆಕ್ಕಾಚಾರ. ಈ ವಿಧಾನದಿಂದ ಹಿಮಯುಗದ ನೀರ್ಗಲ್ಲುಗಳು ಕೇವಲ 10,000 ವರ್ಷಗಳಷ್ಟು ಹಳೆಯವು, ಭಾರತೀಯರು ಅಮೆರಿಕಕ್ಕೆ ವಲಸೆ ಬಂದು ಇಂತಿಷ್ಟು ವರ್ಷಗಳಾಗಿವೆ, ಸತ್ತ ಸಮುದ್ರಜೀವಿಗಳ ಪಳೆಯುಳಿಕೆಗಳ ಪ್ರಾಚೀನತೆ ಇಷ್ಟು ಎಂದು ನಿಖರವಾಗಿ ಲೆಕ್ಕಹಾಕಲಾಗಿದೆ. ಪ್ರಾಕ್ತನಶಾಸ್ತ್ರಕ್ಕೆ (ಆರ್ಕಿಯಾಲಜಿ) ಇದೊಂದು ಅಪೂರ್ವಕೊಡುಗೆ. ಈ ವಿಧಾನ ವಿಕಿರಣಪಟು ಕಾರ್ಬನ್ ಕಾಲನಿರ್ಣಯ ಎಂದು ಪ್ರಪಂಚಪ್ರಸಿದ್ಧ. ಇದಕ್ಕಾಗಿ ಈತ ನೊಬೆಲ್ ಪ್ರಶಸ್ತಿ ಪುರಸ್ಕøತನಾದ (1960). ವಿಶ್ವಕಿರಣಗಳ ಪ್ರಭಾವದಿಂದ ವಾಯುಮಂಡಲದಲ್ಲಿರುವ ಹೈಡ್ರೊಜನ್‍ನ ಒಂದು ಭಾಗ ಟ್ರೈಟಿಯಮ್ ಆಗುತ್ತದೆ. ಪರಿಣಾಮವಾಗಿ ಮಳೆಯ ನೀರಿನ ಮೂಲಕ ಧರೆಗಿಳಿದು ಅಂತರ್ಜಲದಲ್ಲೂ ಅದು ಸೇರಿದೆಯೆಂದು ರುಜುವಾತು ಮಾಡಿದ. ಅಂದರೆ ಬಾವಿ ನೀರು, ಚಿಲುಮೆನೀರು, ನದಿನೀರು, ದ್ರಾಕ್ಷಾರಸ ಇತ್ಯಾದಿಗಳಲ್ಲೂ ಟ್ರೈಟಿಯಮ್ ಇದೆ. ಟೆಲ್ಲರ್ (1908-2003) ಜೊತೆಯಲ್ಲಿ ಅವನು ಇನ್ನೊಂದು ಪ್ರಯೋಗ ಮಾಡಿದ. ಬೈಜಿಕ ಯುದ್ಧವಾದರೆ ವಿಕಿರಣಪಟು ಭಸ್ಮದ ಪತನದ ವ್ಯಾಪ್ತಿ ಬಲುದೂರ. ಇದರಂದ ಅಪಾಯ. ಅದರ ವಿರುದ್ಧ ಜನತೆಯ ರಕ್ಷಣೆ ಅಗತ್ಯ. ಸಾಮಾನ್ಯರೂ ತಾವೇ ನಿರ್ಮಿಸಬಹುದಾದ ಅಗ್ಗದ ರಕ್ಷಣಾಶ್ರಯವನ್ನೂ ವಿನ್ಯಾಸಗೊಳಿಸಿದ. ಮುಂದೊಂದು ದಿನ ಬೆಂಕಿ ಆಕಸ್ಮಿಕದಲ್ಲಿ ಅವನಿದ್ದ ಮನೆ ಮತ್ತು ರಕ್ಷಾಗೂಡು ಎಲ್ಲ ಭಸ್ಮವಾದುವು. ಅವನ ಸಂಶೋಧನೆ ಅವನಿಗೇ ತಿರುಗುಬಾಣವಾಯಿತು!   

(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ